ಮೊನ್ನೆ ನಮ್ಮೂರಲ್ಲಿ ಸಿಕ್ಕಾಪಟ್ಟೆ ಮಳೆ. ಆಕಾಶಕ್ಕೆ ಯಾರೋ ತೂತು ಮಾಡಿದಂತೆ ಮಳೆ ಸುರಿಯುತ್ತಿತ್ತು. ನಾನು ಕಿಟಕಿಯ ಪಕ್ಕ ನಿಂತು ನೋಡುತ್ತಿದ್ದೆ. ಓಡಿ ಹೋಗಿ ಮಳೆಯಲ್ಲಿ ತೋಯಬೇಕೆನಿಸಿತು. ಮೊದಲಾದರೆ ಹಾಗೆ ಮಾಡಬಹುದಿತ್ತು. ಚಿಕ್ಕವಳಿದ್ದಾಗ ಕಾಗದದ ದೋಣಿ ಮಾಡಿ ತೇಲಿಬಿಡುತ್ತಿದ್ದೆ. ಈಗ ಹದಿನೆಂಟು ದಾಟಿದೆ. ಅಮ್ಮ ಒಂದಿಷ್ಟು ಕಟ್ಟುಪಾಡು ವಿಧಿಸಿದ್ದಾಳೆ. ಹಾಗೆಲ್ಲಾ ಆಟ ಆಡಬಾರದಂತೆ. ಹುಡುಗರ ಮುಂದೆ ಹೀ.. ಅಂತ ಹಲ್ಲು ಕಿಸಿಯಬಾರದಂತೆ. ಕಣ್ಣಲ್ಲೇ ಹೆದರಿಸಿ, ಒಳಗೆ ನಡಿ ಎನ್ನುತ್ತಾಳೆ.
ಈ ಮಳೆ ಒಂಥರಾ ಮೊದಲ ಪ್ರೇಮದ ದರ. ಬೇಡ ಬೇಡವೆಂದರೂ ಮೊದಲ ಮಳೆಯನ್ನು ಎಲ್ಲರೂ ನೆನೆದಿರುತ್ತಾರೆ. ಪ್ರೀತಿಯೂ ಹಾಗೇನೇ. ಬೇಡ ಬೇಡ ಎನ್ನುತ್ತಲೇ ಅದರಲ್ಲಿ ಜಾರಿ ಹೋಗಿರುತ್ತೇವೆ. ತಪ್ಪಿಸಿಕೊಳ್ಳಲು ಪ್ರಯತ್ನಿಸಿದಷ್ಟೂ ಅದರಲ್ಲಿ ಸಿಕ್ಕಿಹಾಕಿಕೊಂಡಿರುತ್ತೇವೆ. ಯಾಕೋ ಅವನ ನೆನಪಾಯಿತು. ಇವತ್ತು ಬೆಳಿಗ್ಗೆ ನಾನು ನಿದ್ರೆಯಿಂದ ಏಳುವ ಮೊದಲೇ `Ever u mis me, never u cry, Fr a drop of tear in ur eyes, Is a day les in my life` ಅಂತ ಮೆಸೇಜು ಕಳುಹಿಸಿದ್ದ. ಕಣ್ಣುಜ್ಜಿಕೊಂಡು ಮುಖ ಅರಳಿಸಿದ್ದೆ. ಇಲ್ಲೇ ಹತ್ತಿರ ಅವನಿದ್ದರೆ ಬೆಚ್ಚೆಗೆ ಅಪ್ಪಿಕೊಂಡು ಈ ಮಳೆಯನ್ನು ನೋಡುತ್ತಾ ನಿಂತರಬಹುದಿತ್ತು ಅನಿಸಿತು.
` ಏನೇ ಅದು, ಮಳೆಯನ್ನು ಆ ತರ ನೋಡ್ತಿದ್ದೀಯಲ್ಲಾ, ಅದಕ್ಕೆ ದೃಷ್ಠಿಯಾಗುತ್ತದೆ ಒಳಗೆ ಬಾ` ಎಂದು ಅಮ್ಮ ಗದರಿಸಿದಳು. ಅಮ್ಮ ಹಾಗೆ ಕರೆದಿದ್ದಕ್ಕೆ ಕಾರಣ ಇತ್ತು, ಪಕ್ಕದ ಅಪಾರ್ಟ್‌ಮೆಂಟ್‌ನಲ್ಲಿ ಯಾರೋ ಒಬ್ಬರು ನಿಂತುಕೊಂಡು ಹಲ್ಲುತಿಕ್ಕುತ್ತಾ, ನನ್ನನ್ನೇ ನೋಡುತ್ತಿದ್ದರು. ದೃಷ್ಟಿ ಸರಿ ಇರಲಿಲ್ಲ. ನನ್ನ ಅಜ್ಜಿ ಮೆಟ್ಟಿಲ ಮೇಲೆ ಕುಳಿತು ಕವಳ ಹಾಕಿ ನೀರಿಗೆ ತುಪ್ಪುತ್ತಿದ್ದಳು. ಕವಳದ ಕೆಂಪು ರಸವೆಲ್ಲಾ ನೀರಿನೊಂದಿಗೆ ಸೇರಿ ಹರಿದು ಹೋಗುತ್ತಿತ್ತು. ಇದು ಎಲ್ಲಿಯವರೆಗೆ ಹೋಗುತ್ತದೆ, ಅದರ ಬೆನ್ನ ಹಿಂದೆ ಹೋಗಿ ಹಡುಕಬೇಕೆನಿಸಿತು.
ನಮ್ಮ ಕಾವ್ಯಾಗೆ ಒಳ್ಳೆ ಸಂಬಂಧ ಕೂಡಿ ಬಂದರೆ ಮುಂದಿನ ವರ್ಷ ಮದುವೆ ಮಾಡಿಸಬೇಕು ಎಂದು ಅಪ್ಪ ಯಾರದೋ ಹತ್ತಿರ ಮಾತಾಡುತ್ತಿದ್ದರು. ನನಗೆ ಸಿಟ್ಟು ಬರುತ್ತಿತ್ತು. ಅಪ್ಪನಿಗೆ ಎರಡು ಗುದ್ದಿ ಬುದ್ದಿ ಹೇಳಬೇಕೆನಿಸಿತು. ಎಮ್‌ಬಿಎ ಸೀಟು ಸಿಕ್ಕಿದರೆ ಇವರ ಐಡಿಯಾ ಏನೂ ನಡೆಯುವುದಿಲ್ಲ. ನಾಳೆ ನಾಡಿದ್ದು ಮತ್ತೆ ನಾನು ಬೆಂಗಳೂರಿಗೆ ಹೋಗುತ್ತಿದ್ದೇನೆ. ಮಳೆ ನೋಡಲು ಏನೋ ಒಂದು ಕುಂಟು ನೆಪ ಮಾಡಿಕೊಂಡು ಊರಿಗೆ ಬಂದಿದ್ದೆ. ನನ್ನ ಪಿಜಿ ರೂಮ್‌ಮೇಟ್‌ಗಳ ಬಗ್ಗೆ ಬರೆಯಲು ತುಂಬಾ ಇದೆ.
ಹಾಂ, ನಾನು ನನ್ನ ಹುಡುಗನಿಗೆ ಏನೂ ಅಂತ ರಿಪ್ಲೆ ಮಾಡಿದೆ ಗೊತ್ತಾ, If i know what is love is, it is because of u, ಬರುತ್ತಾ, ನನಗೆ ಏನು ತರ್ತೀಯಾ ಅಂದ, ಅವನಿಗಾಗಿ ಒಂದು ಬೊಗಸೆಯಷ್ಟು ಮಳೆ ಪ್ರೀತಿ ನನ್ನೊಂದಿಗೆ ತೆಗೆದುಕೊಂಡು ಹೋಗುತ್ತಿದ್ದೇನೆ. ಅಮ್ಮನಿಗೆ ಗೊತ್ತಿಲ್ಲದೆ.

ಲೋಡ್ ಆಗುತ್ತಿದೆ......
ಪ್ರತಿಸ್ಪಂದನಗಳು