ಪ್ರತಿ ಬಾರಿ ಸ್ವಾತಂತ್ರ್ಯ ದಿನಾಚರಣೆ ಬಂದಾಗಲೂ ನನಗೆ ನನ್ನ ಬಾಲ್ಯದ ನೆನಪುಗಳು ಒತ್ತರಿಸಿಕೊಂಡು ಬರುತ್ತದೆ. ಗರಿಗರಿ ಬಿಳಿ ಲಂಗ ತೊಟ್ಟು ನಾನು ಶಾಲೆಗೆ ಓಡುತ್ತಿದ್ದೆ. ನಮ್ಮೂರಿನಿಂದ ಶಾಲೆ ತುಂಬಾ ದೂರವಿತ್ತು. ಹೀಗಾಗಿ ನಸುಕಿಗೆ ಐದು ಗಂಟೆಗೇ ಎದ್ದು ನಡೆಯುತ್ತಿದ್ದೆವು. ಜೊತೆಗೆ ಅಪ್ಪ ಇರುತ್ತಿದ್ದ. ನಾವು ಏಳೆಂಟು ಜನ ಹುಡುಗ ಹುಡುಗಿಯರಿರುತ್ತಿದ್ದೆವು. ನಾನು ನನ್ನ ಬಿಳಿಯ ಲಂಗದಲ್ಲಿ ವಿವಿಧ ಬಣ್ಣದ ಹೂವುಗಳನ್ನು ಕಿತ್ತು ಹಾಕಿಕೊಂಡಿರುತ್ತಿದ್ದೆ. ಡೇರೆ, ಕನಕಾಂಬರ, ಕಾಗದ ಹೂವು, ಗುಲಾಬಿ,ರಂಗು ರಂಗಿನ ಕಾಡು ಹೂವುಗಳು. ಅದೆಲ್ಲಾ ಶಾಲೆಯ ಅಂಗಳಲ್ಲಿ ಬಿಡಿಸಿರುತ್ತಿದ್ದ ಭೂಪಟದಲ್ಲಿ ಹಾಕಲು. ಚುಮು ಚುಮು ಮಂಜು ಕರಗಿ, ಬೆಳಕು ಇಷ್ಟಿಷ್ಟೇ ಮೂಡುವ ಹೊತ್ತಿಗೆ ನಾವು ಶಾಲೆಗೆ ಬರುತ್ತಿದ್ದೆವು. ಮೋಡಗಳಿಂದ ಇಳಿದು ಬರುತ್ತಿರುವ ದೇವದೂತರ ಹಾಗೆ...
ಸ್ವಾತಂತ್ರ್ಯ ದಿನಾಚರಣೆಯೆಂದು ಮೊದಲು ಶಾಲೆಗೆ ಬರುತ್ತಿದ್ದವರು ನಾವೇ. ಕಾವೇರಿ ಟೀಚರ್ ಬಂದಿರುತ್ತಿದ್ದರು. ಶಾಲೆಯಲ್ಲಿ ಹಕ್ಕಿಗಳಂತ ಗೆಳತಿಯರು. ಬಿಳಿಯ ಯೂನಿಫಾರ್ಮ್ ತೊಟ್ಟು ಎಲ್ಲರೂ ಕೊಕ್ಕರೆಗಳಂತೆ ಕಾಣುತ್ತಿದ್ದರು. ಎಲ್ಲವೂ ಶುಭ್ರ. ಹುಟ್ಟುವ ಸೂರ್ಯ ಕೂಡ ನಮ್ಮ ಸಂಭ್ರಮ ಕಂಡು ನಗುತ್ತಿದ್ದ. ಮಂಜಪ್ಪ ಮೇಷ್ಟ್ರು ಧ್ವಜವನ್ನು ಕಟ್ಟಿ ಅದರೊಳಗೆ ನಾವು ತಂದಿರುತ್ತಿದ್ದ ಹೂವುಗಳನ್ನು ಹಾಕಲು ಹೇಳುತ್ತಿದ್ದರು. ಇಬ್ಬನಿಯ ಮುತ್ತುಗಳು ಇನ್ನೂ ಉದುರದ ಗುಲಾಬಿ ಪಕಳೆಗಳನ್ನು ಬಿಡಿಸಿ ರಾಷ್ಟ್ರಧ್ವಜದೊಳಗೆ ಹಾಕುತ್ತಿದ್ದೆವು. ಏನೋ ಪುಳಕ. ಶಾಲೆಯ ಅಂಗಳದಲ್ಲಿ ದೊಡ್ಡದಾಗಿ ಭೂಪಟವನ್ನು ಬಿಡಿಸಿ ಅದರೊಳಗೆ ಸಾಲಾಗಿ ನಮ್ಮನ್ನು ನಿಲ್ಲಿಸುತ್ತಿದ್ದರು. ನಾವು ಅಭಿಮಾನದಿಂದ ಕತ್ತೆತ್ತಿಕೊಂಡು ಪಟಪಟಿಸುವ ರಾಷ್ಟ್ರಧ್ವಜವನ್ನು ನೋಡುತ್ತಿದ್ದೆವು.
ನಮ್ಮೂರಿನ ಹಿರಿಯ ಜೀವ ರಾಮಜ್ಜ ಧ್ವಜಾರೋಹಣ ಮಾಡುತ್ತಿದ್ದರು. ಮಕ್ಕಳೇ ಸತ್ಯ ನುಡಿಯಿರಿ, ಒಳ್ಳೆಯದನ್ನು ಪ್ರೀತಿಸಲು ಕಲಿಯಿರಿ, ಸ್ವಾತಂತ್ರ್ಯ ನಮಗೆ ತುಂಬಾ ಕಷ್ಟ ಪಟ್ಟು ಸಿಕ್ಕಿದ ಮುತ್ತು ಎಂದು ಮುತ್ತಿನಂಥ ಮಾತನಾಡುತ್ತಿದ್ದರು. ನಾವು ಕೀರಲು ಧ್ವನಿಯಲ್ಲಿ ಜನಗಣಮನ, ವಂದೇ ಮಾತರಂ ಹಾಡಿ, ನಿಂಬೆಹುಳಿ ಚಾಕಲೇಟಿಗಾಗಿ ಸಾಲಿನಲ್ಲಿ ನಿಲ್ಲುತ್ತಿದ್ದೆವು. ಆಗ ಮಾತ್ರ ಸ್ವಲ್ಪ ಗಲಾಟೆ. ನಂತರ ಭಾಷಣದ್ದು. ಸ್ವಾತಂತ್ರ್ಯ ದಿನಾಚರಣೆಗೆ ಒಂದು ತಿಂಗಳು ಇರುವಾಗಲೇ ನಾನು ಭಾಷಣ ಬರೆಯಿಸಿಕೊಂಡು ಕಂಠಪಾಠ ಪ್ರಾರಂಭಿಸುತ್ತಿದ್ದೆ. ಎಂಥಾ ಸಂಭ್ರಮ ಎನ್ನುತ್ತೀರಾ, ನೋಟ್ ಪುಸ್ತಕದ ನಡುವಿನ ಹಾಳೆಯಲ್ಲಿ ಬರೆಯಿಸಿಕೊಂಡ ಆ ಭಾಷಣ ಇನ್ನೂ ನನ್ನ ಮನಸ್ಸಿನಲ್ಲಿದೆ. ನಿಷ್ಕಲ್ಮಶ ಮನಸ್ಸಿನಿಂದ ಮಾಡಿದ ಭಾಷಣಕ್ಕೆ ಚಿತ್ರದಲ್ಲಿ ಮಂದಸ್ಮಿತನಾಗಿರುವ ಗಾಂಧಿ ತಾತನೆ ಎದ್ದು ಬಂದು ಮುತ್ತು ಕೊಡುತ್ತಿದ್ದನೋ ಏನೋ... ಅಷ್ಟು ಮಾಧುರ್ಯವಾಗಿರುತ್ತಿತ್ತು.
ಈಗ ಮತ್ತೆ ಸ್ವಾತಂತ್ರೋತ್ಸವ ಬಂದಿದೆ. ಮೊದಲಿನಂತೆ ಖುಷಿ ಇಲ್ಲ. ಉತ್ಸಾಹವಿಲ್ಲ. ಯಾರೋ ಕಳುಹಿಸಿದ ಒಂದು ಮಸೇಜಿಗೆ ಸೇಮ್ ಟು ಯೂ ಎಂದು ರಿಪ್ಲೆ ಕುಟ್ಟಿ ಮುಖ ಕೆಳಗೆ ಹಾಕಿಕೊಂಡು ಕುಳಿತಿದ್ದೇನೆ. ನನ್ನ ಮನೆ ಎದುರಿಗಿರುವ ಪುಟ್ಟ ಮಲ್ಲಿಗೆ ಮೊಗ್ಗಿನಂತಿರುವ ಶಾಲಾ ಮಕ್ಕಳೊಂದಿಗೆ ಧ್ವಜಾರೋಹಣ ನೋಡಲು ಹೋಗುವ ಆಸೆ. ಅವರ ನಡುವೆ ನಿಂತು ಅವರದೇ ಕೀರಲು ದ್ವನಿಯಲ್ಲಿ ಜನಗಣಮನ ಹಾಡುವ ಆಸೆ. ಮಕ್ಕಳೇ ಒಳ್ಳೆಯದನ್ನು ಪ್ರೀತಿಸಿ ಎಂದು ಹೇಳುವ ಆಸೆ.. ಲಂಗದಲ್ಲಿ ಬೇರೆ ಬೇರೆ ಕಾಡು ಹೂವುಗಳನ್ನು ಕಿತ್ತು ಧ್ವಜದಲ್ಲಿ ಹಾಕಿ ಹಾರಿಸುವಾಸೆ.. ಆದರೆ ಕಳ್ಳ ಮನಸ್ಸು ಸಿಕ್ಕಾಪಟ್ಟೆ ಸೋಂಬೇರಿಯಾಗಿದೆ.
ಆದರೆ ಈ ಬಾರಿ ಹೋಗೇ ಹೋಗುತ್ತೇನೆ. ಎದುರುಮನೆಯ ಪುಟಾಣಿಗೊಂದು ಚುಟುಕಾದ ಭಾಷಣ ಬರೆದುಕೊಟ್ಟಿದ್ದೇನೆ. ನಾನು ಚಿಕ್ಕವಳಿದ್ದಾಗ ಮಾಡುತ್ತಿದ್ದ ಅದೇ ಭಾಷಣ. ಒಂದೇ ಒಂದು ಪ್ಯಾರ. ಈ ಚೂಟಿ ಮಾಡುವ ನನ್ನದೇ ಭಾಷಣ ಕೇಳಲು, ನನ್ನದೇ ಬಾಲ್ಯಕ್ಕೆ ಮರಳು ಈ ಬಾರಿ ಖಂಡಿತ ಧ್ವಜಾರೋಹಣ ನೋಡಲು ಹೋಗಿಬರುತ್ತೇನೆ. ಎಳೆಯ ಮಗುವಾಗಿ... ಹಾರುವ ಹಕ್ಕಿಯಾಗಿ....

ಲೋಡ್ ಆಗುತ್ತಿದೆ......
ಪ್ರತಿಸ್ಪಂದನಗಳು