Webdunia: Portal - Search - Mail - Greetings   More >>
Support | Font Download | Feedback
Search  
Welcome, Guest  [ Register | Sign In ]

ಹಾಸ್ಟೆಲಿನ ಬಾಲ್ಕನಿಯಿಂದ...

ಮೊನ್ನೆ ಮೊನ್ನೆ ಕವನ ಹೊಟ್ಟೆನೋವೆಂದು ರಚ್ಚೆ ಹಿಡಿದು ಅಳುತ್ತಿದ್ದಳು. ನಿನಗೇನು ಹೆರಿಗೆ ನೋವು ಕಾಣಿಸಿಕೊಂಡಿಲ್ಲ ಸುಮ್ಮನಿರು ಎಂದು ಗದರಿ ಸುಪ್ರಿ ಲೇಸ್ ತಿನ್ನುವುದರಲ್ಲೇ ಮೈಮರೆತಿದ್ದಳು. ಇದೆಲ್ಲಾ ಹೆಂಗಸರಿಗೆ ತಿಂಗಳಿಗೊಮ್ಮೆ ಮಾಮೂಲು ಎಂಬಂತಿತ್ತು ಅವಳ ಮಾತಿನ ಧಾಟಿ. ಆವತ್ತು ಸುಪ್ರಿ ಧರಿಸಿದ ಡ್ರೆಸ್ ನೋಡಿದರೇನೇ ಒಳ್ಳೆ ಪೂಲನ್ ದೇವಿಯ ತರ ಕಾಣಿಸುತ್ತಿದ್ದಳು. ಉದ್ದ ತೋಳಿನ ಶರ್ಟು ಹಾಕಿ, ತಲೆಗೊಂದು ಜಾಕಿ ಕ್ಯಾಪ್ ಹಾಕಿಕೊಂಡು ಎಫ್‌ಎಂ ಕೇಳುತ್ತಿದ್ದಳು. ಪುಣ್ಯಕ್ಕೆ ಕೈಯಲ್ಲಿ ಸಿಗರೇಟು ಇರಲಿಲ್ಲ. (ಸೇದುವುದಿಲ್ಲ ಬಿಡಿ) ಲೇ ನಿನ್ನನ್ನು ಯಾವುದಾದರೂ ಬಾಯ್ಸ್ ಹಾಸ್ಟೆಲಿಗೆ ಸೇರಿಸಿ ಬರಬೇಕು ಎಂದು ಹೇಳಿದೆ. ಪ್ಲೀಸ್ ಕಣೇ ಬೇಗ ಆ ಕೆಲಸ ಮಾಡು ಎಂದು ನಕ್ಕಳು.

ಹೀಗಿರುವ ನಮ್ಮ ಸುಪ್ರಿ ಇದ್ದಕ್ಕಿದ್ದಂತೆ ಮಂಕಾದಳು. ಏನಾಯ್ತೇ ನಿನ್ನ ಗಂಡ ಕೈಕೊಟ್ನಾ ಅಂತ ಕೇಳಿ ನೋಡಿದೆ. ಮಾತಿಲ್ಲ. ನಿನಗೆ ತಿಂಗಳಿಗೆ ಎರಡೆರಡು ಸಲ ಹೊಟ್ಟೆನೋವಾ ಎಂದು ಕಿಚಾಯಿಸಿದೆ. ಇಲ್ಲ ಎಂದಳು. ಮತ್ತೆ ಏನು ಕೇಳಿದರೂ ಹೀಗೆ ಮುಖ ಊದಿಸಿಕೊಂಡು ಯಾಕೆ ಕೂತಿದ್ದೀಯಾ ಎಂದು ನಾನೂ ಕವನ ಒಬ್ಬರಾದ ಮೇಲೊಬ್ಬರು ಕೇಳಿನೋಡಿದೆವು. ಅವಳ ಬಾಯಲ್ಲಿ ಮಾತಿಲ್ಲ. ಸರಿ ಎಂದು ಸುಮ್ಮನಾದೆವು. ಅವಳು ಮಲಗುವ ಕಾಟಿನ ಪಕ್ಕದ ಗೋಡೆಗೆ ಅಂಟಿಕೊಂಡಂತೇ ದೊಡ್ಡದೊಂದು ಪೋಸ್ಟರ್ ತೂಗು ಹಾಕಿದ್ದಾಳೆ. ಪುಟ್ಟ ಮಗುವೊಂದು ಹಣತೆ ಕೈಯಲ್ಲಿಡಿದು ನಿಂತಿರುವ ಆ ಚಿತ್ರದ ಪ್ರಭೆ ಅದ್ಭುತವಾಗಿದೆ. ಕೆಳಗೆ ಕೆ.ಎಸ್‌ಎನ್ ಅವರ ಸಾಲು, ದೀಪವೂ ನಿನ್ನದೇ ಗಾಳಿಯೂ ನಿನ್ನದೇ ಆರದಿರಲಿ ಬೆಳಕು... ತುಂಬಾ ಬೋಲ್ಡ್ ಆಗಿ ಕಾಣಿಸುವ ಈ ಸುಪ್ರಿಯ ಮನಸ್ಸು ಮಾತ್ರ ಬೆಣ್ಣೆಯಂತೆ ಮೃದು. ಸಾಹಿತ್ಯ ಮನಶಾಸ್ತ್ರ ಅಂತ ಏನೆಲ್ಲಾ ಓದಿಕೊಂಡಿದ್ದಾಳೆ. ಮಾತು ಮಾತ್ರ ಶೂಟ್ ಅಟ್ ಸೈಟ್.

ಸುಪ್ರಿಯ ಹುಡುಗ ನಾಚಿಕೆ ಮುಳ್ಳಿನ ಸ್ವಭಾವದವ. ಇವಳೊಮ್ಮೆ ಮುಟ್ಟಿದರೂ ಸಾಕು ನಾಚಿಕೆಯಿಂದ ಮುದುಡಿ ಹೋಗುತ್ತಾನೆ. ಇವಳು ಅವನನ್ನು ಕಿರುಗಣ್ಣಿನಲ್ಲೇ ಗದರಿಸಿ ಹದ್ದುಬಸ್ತಿನಲ್ಲಿಟ್ಟುಕೊಂಡಿದ್ದಾಳೆ. ನಮಗೆ ಈ ಹುಡುಗನ ಪರಿಚಯ ಇದ್ದರೂ ಮಸೇಜು, ಫೋನು ಮಾಡುವಂತಿಲ್ಲ. ಸುಪ್ರಿಗೆ ಅದೆಲ್ಲಾ ಇಷ್ಟವಿಲ್ಲ. `ಲೇ ಗಂಡ ನೀನೇನಾದರೂ ನಾನು ಇಲ್ಲದ ಹೊತ್ತಲ್ಲಿ ನಮ್ಮ ರೂಮ್‌ಮೇಟ್ಸ್‌ಗಳಿಗೆ ಕಾಳು ಹಾಕಿದರೆ ಅಷ್ಟೇ ನಿನ್ನ ಕಥೆ` ಎನ್ನುತ್ತಿರುತ್ತಾಳೆ. ಹೀಗೆ ಏನೆಲ್ಲಾ ಹೇಳಿದರೂ ಅವರಿಬ್ಬರು ತುಂಬಾ ವರ್ಷಗಳಿಂದ ಒಟ್ಟಿಗೆ ಸಂಸಾರ ಮಾಡಿದವರಂತೆ, ಒಳ್ಳೆ ಗಂಡ ಹೆಂಡಿರಂತೆ ಹೊಂದಿಕೊಂಡು, ಮುನಿಸಿಕೊಂಡು ಹೋಗುವುದನ್ನು ನೋಡಿದಾಗ ಖುಷಿ ಆಗುತ್ತದೆ. ಸುಪ್ರಿ ಊರಿಗೆ ಹೋಗುವಾಗ ನನ್ನ ತವರಿಗೆ ಹೆರಿಗೆಗೆ ಹೋಗುತ್ತಿದ್ದೀನಿ, ಬರುವರೆಗೂ ಕತ್ತೆ ತರ ತಿರುಗಬೇಡ, ಡೀಸೆಂಟ್ ಆಗಿ ಮನೆ ಕಾಯ್ಕೊಂಡು ಇರಿ ಎಂದು ಅವನಿಗೆ ಮಸೇಜ್ ಕಳುಹಿಸುತ್ತಾಳೆ.

ನಿನ್ನನ್ನು ನಿಜವಾಗಿಯೂ ಸಹಿಸಿಕೊಂಡು ಇರುವ ಅವನನ್ನು ಮೆಚ್ಚಬೇಕು, ಬೇರೆ ಯಾರಾದರೂ ಆಗಿದ್ದರೆ ಇಷ್ಟೊತ್ತಿಗೆ ಓಡಿಹೋಗುತ್ತಿದ್ದರು ಎಂದು ನಾನೂ ಕವನ ಇಬ್ಬರೂ ಸೇರಿ ಸುಪ್ರಿಯನ್ನು ಗೋಳು ಹೊಯ್ದುಕೊಳ್ಳುತ್ತೇವೆ. ರೋಮಾನ್ಸ್ ಮಾಡೋದರಲ್ಲಿ ಅವನು ಹೆಚ್ಚೋ ನೀನು ಹೆಚ್ಚೋ ಎಂದು ಕೇಳುತ್ತೇವೆ. ಥೂ ದರಿದ್ರ ಮುಂಡೇವು ಮದುವೆ ಮಾಡಿಸಿದ್ದರೆ ಇಷ್ಟೊತ್ತಿಗೆ ನನ್ನ ವಯಸ್ಸಿನ ನಾಲ್ಕು ಮಕ್ಕಳಿರುತ್ತಿದ್ದರು ಎಂದು ತನ್ನ ಎಂದಿನ ಶೈಲಿಯಲ್ಲಿ ಗದರುತ್ತಾಳೆ. ಇಂತಿಪ್ಪ ಸುಪ್ರಿಯ ಹುಡುಗ ಮೊನ್ನೆ ತನ್ನ ಕ್ಲಾಸ್ ಮೇಟ್ ಹುಡುಗಿ ಬರ್ತ್ ಡೆಗೆ ಒಂದು ಗ್ರೀಟಿಂಗ್ ಕಾರ್ಡು ಕೊಟ್ಟಿದ್ದೇ ಈಕೆಯ ಮುನಿಸಿಗೆ ಕಾರಣ. ಅದರಲ್ಲಿ ಏನಿತ್ತೋ ಏನೋ? ಇವಳು ಹಾಸ್ಟೆಲಿನ ಬಾಲ್ಕನಿಯಲ್ಲಿ ಕುಂಡಿ ಸುಟ್ಟ ಬೆಕ್ಕಿನಂತೆ ಈಗ ಅಡ್ಡಾಡುತ್ತಿದ್ದಾಳೆ.

ಪ್ರತಿಸ್ಪಂದನಗಳು

Re: ಹಾಸ್ಟೆಲಿನ ಬಾಲ್ಕನಿಯಿಂದ...
----ಸುಪ್ರಿ ಊರಿಗೆ ಹೋಗುವಾಗ ನನ್ನ ತವರಿಗೆ ಹೆರಿಗೆಗೆ ಹೋಗುತ್ತಿದ್ದೀನಿ, ಬರುವರೆಗೂ ಕತ್ತೆ ತರ ತಿರುಗಬೇಡ, ಡೀಸೆಂಟ್ ಆಗಿ ಮನೆ ಕಾಯ್ಕೊಂಡು ಇರಿ ಎಂದು ಅವನಿಗೆ ಮಸೇಜ್ ಕಳುಹಿಸುತ್ತಾಳೆ ---- ha ha. ha very nice. chennagi bardidira kavya.
Re: ಹಾಸ್ಟೆಲಿನ ಬಾಲ್ಕನಿಯಿಂದ...
ಸುಪ್ರಿಯ ಪೋನ್ ನಂಬರ್ ಕೊಡಿ ಕಾವ್ಯ
ಹಕ್ಕು ನಿರಾಕರಣೆ